ಹೊಸನಗರ ಶಾಸಕರ ಸರ್ಕಾರಿ ಮಾದರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ತಾಯಂದಿರ ಕೈತುತ್ತಿನ ಕಲರವ...
ಹೊಸನಗರ : ಜಗತ್ತಿನಲ್ಲಿ ಅತಿ ಶ್ರೇಷ್ಠವಾದದ್ದು ಯಾವುದು ಎಂದರೆ ಅಮ್ಮನ ಕೈ ತುತ್ತು ಎಂದೇ ಎಲ್ಲರೂ ಉತ್ತರಿಸುತ್ತಾರೆ. ಯಾಕೆಂದರೆ, ತಾಯಿಯ ಪ್ರೀತಿಯನ್ನು ಮೀರಿದ್ದು ಈ ಜಗತ್ತಿನಲ್ಲಿ ಬೇರಿಲ್ಲ, ಇಂತಹ ಪ್ರೀತಿಯಿಂದಲೇ ಅಮ್ಮ ನೀಡುವ ಕೈ ತುತ್ತಿಗೆ ಜಗತ್ತಿನಲ್ಲಿ ಶ್ರೇಷ್ಠವಾದ ಸ್ಥಾನ ಲಭ್ಯವಾಗಿದೆ. ಆದರೆ ಯಾಂತ್ರಿಕವಾಗುತ್ತಿರುವ ಇಂದಿನ ಜಗತ್ತಿನಲ್ಲಿ ಕೆಲಸದ ಭರಾಟೆ, ಇಂಟರ್ನೆಟ್ ಗೀಳು, ಟಿವಿಯೆಡೆಗಿನ ಸೆಳೆತದಿಂದಾಗಿ ಅಮ್ಮಂದಿರು ತಮ್ಮ ಮಕ್ಕಳಿಗೆ ಕೈ ತುತ್ತು ನೀಡುವ ಕ್ಷಣಗಳೇ ಕಡಿಮೆಯಾಗುತ್ತಿವೆ. ಹೀಗೆಂದು ಸರ್ವೆಯೊಂದು ಕೂಡಾ ಇತ್ತೀಚೆಗೆ ಇದನ್ನು ದೃಢಪಡಿಸಿದೆ.
ಈ ಹಿನ್ನೆಲೆಯಲ್ಲಿ ಹೊಸನಗರ ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಚಿಣ್ಣರ ಸಾಂಸ್ಕೃತಿಕ ವೈಭವ ಸಮಾರಂಭದ ಅಂಗವಾಗಿ ಇಂದು ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಮಕ್ಕಳ ತಾಯಂದಿರನ್ನು ಶಾಲೆಗೆ ಕರೆಸಿ, ತಮ್ಮ ಮಕ್ಕಳಿಗೆ ಕೈ ತುತ್ತು ತಿನ್ನಿಸುವ ಮೂಲಕ ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಯಾಗಿಸುವ ಆತ್ಮೀಯ ಕ್ಷಣಕ್ಕೆ ಹೊಸನಗರ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಇಂದು ಸಾಕ್ಷಿಯಾಯಿತು. ಶಾಲೆಯ ಮಾತಾ ಭಾರತಿ ಸಾಂಸ್ಕೃತಿಕ ಭವನ ಹಾಗೂ ಅದರ ಎದುರು ಹಾಕಿದ್ದ ಶಾಮಿಯಾನಾದ ನೆರಳಿನಲ್ಲಿ ಶಾಲಾ ಮಕ್ಕಳು ಹಾಗೂ ಅವರ ತಾಯಂದಿರು ಒಟ್ಟಿಗೆ ಕುಳಿತು ’ಅಸತೋಮಾ ಸದ್ಗಮಯ’ ಶ್ಲೋಕವನ್ನು ಹೇಳಿ, ’ಅನ್ನದಾತೋ ಸುಖೀಭವ’ ಎಂದು ಮಕ್ಕಳಿಗೆ ತಾಯಂದಿರು ಸಿಹಿ ತಿನ್ನಿಸುವ ಮೂಲಕ ಕೈ ತುತ್ತು ತಿನ್ನಿಸಿದರು.
ಶಾಲೆಯಲ್ಲಿ ತಯಾರಿಸಿದ್ದ ಪಾಯಸದೊಂದಿಗೆ ವಿಶೇಷ ಭೋಜನ ಅಮ್ಮಂದಿರ ಕೈ ತುತ್ತಿನಿಂದಾಗಿ ಇನ್ನಷ್ಟು ಸಿಹಿಯಾಯಿತೇನೋ ಎನ್ನುವಂತೆ ಮಕ್ಕಳ ಮುಖದಲ್ಲಿ ಅರಳಿದ ಮಂದಹಾಸ, ಮಕ್ಕಳಿಗೆ ಕೈ ತುತ್ತು ತಿನ್ನಿಸುವ ಖುಷಿಯಲ್ಲಿ ಮುಳುಗಿದ್ದ ತಾಯಂದಿರು... ನಿಜಕ್ಕೂ ಶಾಲೆಯ ಶತಮಾನೋತ್ಸವದ ಸಂಭ್ರಮಕ್ಕೆ ಈ ಕ್ಷಣಗಳು ಇನ್ನಷ್ಟು ರಂಗು ತಂದವು. ಇದರೊಂದಿಗೆ ಮಿತ್ರ ಭೋಜನವನ್ನು ಕೂಡಾ ಏರ್ಪಡಿಸಲಾಗಿತ್ತು. ವಾಟ್ಸಪ್ ಯುಗದಲ್ಲಿ ಸ್ನೇಹಿತರು ಒಟ್ಟಿಗೇ ಕುಳಿತು ಮಾತನಾಡುವುದೇ ಕಡಿಮೆಯಾಗಿರುವಾಗ ಇನ್ನು ಒಟ್ಟಿಗೇ ಕುಳಿತು ಊಟ ಮಾಡುವುದಾದರೂ ಎಲ್ಲಿ? ಆದ್ದರಿಂದಲೇ ಸ್ನೇಹಿತರು ಒಟ್ಟಿಗೇ ಕುಳಿತು ಊಟ ಮಾಡುತ್ತಾ ಸ್ನೇಹವನ್ನು ಇನ್ನಷ್ಟು ಗಟ್ಟಿಯಾಗಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಏರ್ಪಡಿಸಿದ್ದ ಮಿತ್ರ ಭೋಜನದಲ್ಲಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಕುಳಿತು ಖುಷಿಯಿಂದ ಊಟ ಮಾಡುತ್ತಿದ್ದದ್ದು ಕೂಡಾ ಇಂದಿನ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತ್ತು.
ಶಾಲಾ ಶಿಕ್ಷಕ ವೃಂದದವರು ಹಾಗೂ ಎಸ್ಡಿಎಂಸಿಯವರು ಒಟ್ಟಾಗಿ ತಾಯಿ ಮಗುವಿನ ಬಾಂಧವ್ಯಕ್ಕೆ ಇನ್ನಷ್ಟು ಹೊಳಪು ನೀಡುವ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದರು.








ಕಾಮೆಂಟ್ಗಳಿಲ್ಲ